ಪಾಕ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ..!

0

ಕೇಪ್ಟೌನ್‌ : ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಎಚ್ಚರಿಕೆಯ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಗೆಲುವಿನ ಮೂಲಕ ಅಭಿಯಾನ ಆರಂಭಿಸಿದೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಹರ್ಮಾನ್‌ಪ್ರೀತ್‌ ಕೌರ್‌ ಸಾರಥ್ಯದ ತಂಡ ಶುಭಾರಂಭ ಮಾಡಿದೆ. ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಜೆಮಿಮಾ ರೋಡ್ರಿಗಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಭಾನುವಾರ ನಡೆದ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ ನಾಯಕಿ ಮರೂಫ್‌ (68ರನ್‌, 55 ಎಸೆತ, 7 ಬೌಂಡರಿ) ಅರ್ಧಶತಕದ ನೆರವಿನಿಂದ 4 ವಿಕೆಟ್‌ಗೆ 149 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಜೆಮಿಮಾ ರೋಡ್ರಿಗಸ್‌ (53*ರನ್‌, 38 ಎಸೆತ, 8 ಬೌಂಡರಿ) ಅಜೇಯ ಅರ್ಧಶತಕದ ನೆರವಿನಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 151 ರನ್‌ ಬಾರಿಸಿ ಗೆಲುವು ಕಂಡಿತು.

ಚೇಸಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಯಾವ ಹಂತದಲ್ಲೂ ಸೋಲುವ ಭೀತಿ ಎದುರಾಗಲಿಲ್ಲ. ಮೊತ್ತವನ್ನು ಸುಲಭವಾಗಿ ಬೆನ್ನಟ್ಟುವ ಆತ್ಮವಿಶ್ವಾಸದಲ್ಲಿಯೇ ಕಣಕ್ಕಿಳಿದ ಆರಂಭಿಕರಾದ ಯತ್ಸಿಕಾ ಭಾಟಿಯಾ (17 ರನ್‌, 20 ಎಸೆತ, 2 ಬೌಂಡರಿ) ಹಾಗೂ ಶೆಫಾಲಿ ವರ್ಮ(33 ರನ್‌, 25 ಎಸೆತ, 4 ಬೌಂಡರಿ) ಮೊದಲ ವಿಕೆಟ್‌ಗೆ 38 ರನ್‌ಗಳ ಉತ್ತಮ ಜೊತೆಯಾಟವಾಡಿ ಬೇರ್ಪಟ್ಟರು. ವಿಶ್ವಾಸದಿಂದ ಆಡುತ್ತಿದ್ದ ಯತ್ಸಿಕಾ, ಸಾದಿಯಾ ಇಕ್ಬಾಲ್‌ಗೆ ವಿಕೆಟ್‌ ನೀಡಿದರು.

ಬಳಿಕ ಶೆಫಾಲಿಗೆ ಜೊತೆಯಾದ ಜೆಮಿಮಾ 2ನೇ ವಿಕೆಟ್‌ಗೆ 27 ರನ್‌ ಜೊತೆಯಾಟವಾಡಿದರು. 10ನೇ ಓವರ್‌ ವೇಳೆಗೆ 70 ರನ್‌ಗಳ ಸಮೀಪವಿದ್ದ ಭಾರತ ಗೆಲುವಿನ ವಿಶ್ವಾಸದಲ್ಲಿತ್ತು. ಶೆಫಾಲಿ ವರ್ಮ ನಿರ್ಗಮನದ ಬಳಿಕ ಜೊತೆಯಾದ ನಾಯಕಿ ಹರ್ಮಾನ್‌ ಪ್ರೀತ್‌ ಕೌರ್‌ (16) ಹೆಚ್ಚಿನ ರನ್‌ ಬಾರಿಸಲಿಲ್ಲ. ಜೆಮಿಮಾ-ಕೌರ್‌ ಜೋಡಿ ಮೂರನೇ ವಿಕೆಟ್‌ಗೆ 28 ರನ್‌ ಜೊತೆಯಾಟವಾಡಿ ಬೇರ್ಪಟ್ಟರು.

About Author

Leave a Reply

Your email address will not be published. Required fields are marked *

You may have missed