ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಎಂ.ಎಸ್‌ ಧೋನಿ!

0

ಬೆಂಗಳೂರು : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌ ಧೋನಿ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಚೆಪಾಕ್‌ನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 6ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಎದುರು ಸಿಡಿದೆದ್ದ ಧೋನಿ 3 ಎಸೆತಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು.

ವೇಗಿ ಮಾರ್ಕ್‌ ವುಡ್‌ ಎದುರು ಸಿಕ್ಸರ್‌ಗಳ ಹ್ಯಾಟ್ರಿಕ್‌ ಸಿಡಿಸುವ ಪ್ರಯತ್ನದಲ್ಲಿ ವಿಕೆಟ್‌ ಕೈಚೆಲ್ಲಿದರು. ಆದರೆ, ಇದೇ ವೇಳೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ 5 ಸಾವಿರ ರನ್‌ಗಳ ಗಡಿ ದಾಟಿದ ಐದನೇ ಭಾರತೀಯ ಬ್ಯಾಟರ್‌ ಎಂಬ ದಾಖಲೆ ನಿರ್ಮಿಸಿದರು.

ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಿದ ಸಿಎಸ್‌ಕೆ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಮೂಲಕ ಎಲ್‌ಎಸ್‌ಜಿ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿ 20 ಓವರ್‌ಗಳಲ್ಲಿ 217/7 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಬ್ಯಾಟ್‌ ಮಾಡಲು ಬಂದ ಎಂ.ಎಸ್‌ ಧೋನಿ, ಎದುರಿಸಿದ ಮೊದಲ ಎರಡೂ ಎಸೆತಗಳಲ್ಲಿ ಭರ್ಜರಿಯ ಸಿಕ್ಸರ್‌ ಬಾರಿಸಿ ತವರಿನ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (224 ಪಂದ್ಯಗಳಲ್ಲಿ 6706 ರನ್‌) ಅವರದ್ದು. ಎರಡನೇ ಸ್ಥಾನದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಹಾಲಿ ನಾಯಕ ಶಿಖರ್‌ ಧವನ್‌ ಇದ್ದಾರೆ. ಗಬ್ಬರ್‌ ಖ್ಯಾತಿಯ ಎಡಗೈ ಬ್ಯಾಟರ್‌ 199 ಪಂದ್ಯಗಳಲ್ಲಿ 6086 ರನ್‌ಗಳನ್ನು ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದಲ್ಲಿ 5 ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರೋಹಿತ್‌ ಶರ್ಮಾ, 221 ಪಂದ್ಯಗಳಲ್ಲಿ 5764 ರನ್‌ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಮಿಸ್ಟರ್‌ ಐಪಿಎಲ್‌ ಖ್ಯಾತಿಯ ಮಾಜಿ ಆಟಗಾರ ಸುರೇಶ್‌ ರೈನಾ, 205 ಪಂದ್ಯಗಳಲ್ಲಿ 5528 ರನ್‌ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಂಎಸ್‌ ಧೋನಿ ಈ ಗಡಿ ದಾಟಿದ ಮೊದಲ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed