ರೋಚಕ ಜಯ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟ ಭಾರತ

0

ಕೇಪ್ಟೌನ್‌: ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (ICC Womens WorldCup) ನಾಲ್ಕನೇ ಪಂದ್ಯವನ್ನಾಡಿದ ಭಾರತ (India) ತಂಡವು ಐರ್ಲೆಂಡ್‌ (Ireland) ವಿರುದ್ಧ ರೋಚಕ ಜಯ ಸಾಧಿಸಿ ಸೆಮಿ ಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

 

ಮಳೆಗೆ ಆಹುತಿಯಾದ ಈ ಪಂದ್ಯದ ಫಲಿತಾಂಶವನ್ನು ಡಕ್​ವರ್ಥ್ ಲೂಯಿಸ್ ನಿಯಮ (DLS Method) ಪ್ರಕಾರ ನಿರ್ಧರಿಸಲಾಗಿದ್ದು, ಅದರಂತೆ ಟೀಂ ಇಂಡಿಯಾ (Team India Womens) 5 ರನ್​ಗಳ ರೋಚಕ ಜಯ ಸಾಧಿಸಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡವು ಸ್ಮೃತಿ ಮಂದಾನ (Smriti Mandhana) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಕಲೆ ಹಾಕಿ, ಎದುರಾಳಿ ತಂಡಕ್ಕೆ 156 ರನ್‌ಗಳ ಗುರಿ ನೀಡಿತು.

ಆರಂಭಿಕರಾದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 62 ರನ್ ಜೊತೆಯಾಟವಾಡಿದರು. ಇದೇ ವೇಳೆ 24 ರನ್ ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದರು. ಅನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ಎಸೆತ ಎದುರಿಸಿ 13 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜೆಮಿಮಾ ರೋಡ್ರಿಗಸ್ 12 ಎಸೆತಗಳಲ್ಲಿ 19 ರ‌ನ್‌ ಬಾರಿಸಿ ಸ್ಕೋರ್ ಹೆಚ್ಚಿಸಲು ಶ್ರಮಿಸಿದರು.

ಏಕಾಂಗಿ ಹೋರಾಟ ನಡೆಸಿದ ಸ್ಮೃತಿ ಮಂದಾನ 56 ಎಸೆತಗಳಲ್ಲಿ 9 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 87 ರನ್ ಚಚ್ಚಿದರು. ಅಂತಿಮವಾಗಿ ಭಾರತ 155 ರನ್‌ ಕಲೆಹಾಕಿತು.

156 ರನ್​ಗಳ ಕಠಿಣ ಗುರಿ ಪಡೆದ ಐರ್ಲೆಂಡ್ ತಂಡವು 8.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್​ ಬಾರಿಸಿತ್ತು. ಈ ವೇಳೆ ಮಳೆ ಅಡ್ಡಿಯಾದ್ದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ನಿರಂತರ ಮಳೆಯಾಗಿದ್ದರಿಂದ ಪಂದ್ಯ ನಡೆಸುವುದು ಅಸಾಧ್ಯ ಎಂದು ರೆಫರಿ ನಿರ್ಧರಿಸಿದರು. ನಂತರ ಪಂದ್ಯದ ಫಲಿತಾಂಶ ನಿರ್ಧರಿಸಲು ಡಕ್​ ವರ್ಥ್ ಲೂಯಿಸ್ ನಿಯಮದ ಮೊರೆ ಹೋದಾಗ ಐರ್ಲೆಂಡ್ ಮೊತ್ತವು ಟೀಂ ಇಂಡಿಯಾಗಿಂತ 5 ರನ್​ ಕಡಿಮೆಯಿತ್ತು.

ಡಕ್‌ವರ್ತ್‌ ನಿಯಮದ ಅನ್ವಯ 8.2 ಓವರ್​ಗಳಲ್ಲಿ ಐರ್ಲೆಂಡ್‌ 59 ರನ್​ ಬಾರಿಸಬೇಕಿತ್ತು. ಆದರೆ ಐರ್ಲೆಂಡ್‌ 5 ರನ್‌ ಹಿಂದಿದ್ದ ಕಾರಣ ಭಾರತ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್​ಗೆ ಪ್ರವೇಶಿಸಿತು. ಇದೀಗ ವಿಶ್ವಕಪ್‌ ಎ-ತಂಡದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ ಇದ್ದರೆ, ಬಿ ತಂಡದಲ್ಲಿ ಭಾರತ-ಇಂಗ್ಲೆಂಡ್‌ ತಂಡಗಳು ಸೆಮಿಸ್‌ಗೆ ತಲುಪಿವೆ.

ಐರ್ಲೆಂಡ್ ಪರ ಬೌಲಿಂಗ್‌ನಲ್ಲಿ ನಾಯಕಿ ಲಾರಾ ಡೆಲಾನಿ 33 ರನ್‌ಗಳಿಗೆ 3 ವಿಕೆಟ್ ಪಡೆದರೆ, ಪ್ರೆಂಡರ್‌ಗಾಸ್ಟ್ ಎರಡು ವಿಕೆಟ್ ಮತ್ತು ಅರ್ಲೀನ್ ಕೆಲ್ಲಿ ಒಂದು ವಿಕೆಟ್ ಪಡೆದರು.

About Author

Leave a Reply

Your email address will not be published. Required fields are marked *

You may have missed