ಸೂಪರ್‌ ಜಯಂಟ್ಸ್‌ ಎದುರು ಲಾಸ್ಟ್‌ ಓವರ್‌ ಥ್ರಿಲ್ಲರ್‌ ಗೆದ್ದ ಸೂಪರ್‌ ಕಿಂಗ್ಸ್‌!

0

ಚೆನ್ನೈ : ಋತುರಾಜ್‌ ಗಾಯಕ್ವಾಡ್‌ (57 ರನ್‌, 31 ಎಸೆತ, 3 ಫೋರ್‌, 4 ಸಿಕ್ಸರ್‌) ಮತ್ತು ಡೆವೋನ್‌ ಕಾನ್ವೇ (47 ರನ್‌, 29 ಎಸೆತ, 5 ಫೋರ್‌, 2 ಸಿಕ್ಸರ್‌) ಅವರ ಸಿಡಿಲಬ್ಬರದ ಶತಕದ ಜತೆಯಾಟದ ಹಾಗೂ ಮೊಯೀನ್‌ ಅಲಿ (26ಕ್ಕೆ 4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ತನ್ನ ಎರಡನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 12 ರನ್‌ಗಳ ರೋಚಕ ಜಯ ಗಳಿಸಿ ಅಂಕಪಟ್ಟಿಯಲ್ಲಿ ಕಾತೆ ತೆರೆದಿದೆ

ಚೆಪಾಕ್‌ನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಸಿಎಸ್‌ಕೆ ತನ್ನ 20 ಓವರ್‌ಗಳಲ್ಲಿ7 ವಿಕೆಟ್‌ ನಷ್ಟಕ್ಕೆ 217 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ಎಲ್‌ಎಸ್‌ಜಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಲಷ್ಟೇ ಶಕ್ತಗೊಂಡಿತು. ಕೈಲ್‌ ಮೇಯರ್ಸ್‌ ಕೇವಲ 22 ಎಸೆತಗಳಲ್ಲಿ 53 ರನ್‌ ಸಿಡಿಸಿ ತಂಡದ ಹೋರಾಟಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಆದರೆ ಪ್ರಮುಖ ಬ್ಯಾಟರ್‌ಗಳಾದ ದೀಪಕ್‌ ಹೂಡಾ ಮತ್ತು ಕೃಣಾಲ್‌ ಪಾಂಡ್ಯ ನಿರಾಶೆ ಮೂಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಮರ್ಕಸ್‌ ಸ್ಟೋಯ್ನಿಸ್‌ (21), ನಿಕೋಲಸ್‌ ಪೂರನ್‌ (32), ಆಯುಶ್‌ ಬದೋನಿ (23) ಹೋರಾಟ ನಡೆಸಿದರೂ ಯಶಸ್ಸು ಕೈಹಿಡಿಯಲಿಲ್ಲ. ಹೀಗಾಗಿ ಅಂತಿಮ ಓವರ್‌ ವರೆಗೂ ಹೋರಾಟ ನಡೆಸಿ ಕೊನೆಗೆ 12 ರನ್‌ಗಳಿಂದ ವೀರೋಚಿತವಾಗಿ ಸೋಲೆದುರಿಸಬೇಕಾಯಿತು. ಸಿಎಸ್‌ಕೆ ಪರ ಮೊಯೀನ್‌ ಅಲಿ 4 ವಿಕೆಟ್‌ ಉರುಳಿಸಿದರೆ, ತುಷಾರ್‌ ದೇಶಪಾಂಡೆ 2 ವಿಕೆಟ್‌ ತಮ್ಮದಾಗಿಸಿಕೊಂಡರು.

ಬೃಹತ್ಮೊತ್ತಗಳಿಸಿದಸಿಎಸ್ಕೆ
ಮೊದಲ ಸೋಲಿನ ನಿರಾಸೆಯಿಂದ ಹೊರಬರುವ ತವಕದಲ್ಲಿದ್ದ ಸಿಎಸ್‌ಕೆಗೆ ಋತುರಾಜ್‌ ಮತ್ತು ಕಾನ್ವೇ ಭರ್ಜರಿ ಆರಂಭ ಒದಗಿಸಿದರು. ಆವೇಶ್‌ ಖಾನ್‌ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ 5 ವೈಡ್‌ ಸೇರಿ 17 ರನ್‌ ಕಲೆಹಾಕಿದ ಸಿಎಸ್‌ಕೆ, ದೊಡ್ಡ ಮೊತ್ತದ ಸುಳಿವು ನೀಡಿತು. ಲಖನೌ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ ಗಾಯಕ್ವಾಡ್‌ ಮತ್ತು ಕಾನ್ವೇ ಜೋಡಿ ಪವರ್‌-ಪ್ಲೇ ಓವರ್‌ಗಳಲ್ಲಿ 79 ರನ್‌ ಜೋಡಿಸಿತು. ಈ ಮೂಲಕ ಸಿಎಸ್‌ಕೆ ಐಪಿಎಲ್‌ನಲ್ಲಿ ತನ್ನ ಮೂರನೇ ಗರಿಷ್ಠ ಪವರ್‌-ಪ್ಲೇ ಸ್ಕೋರ್‌ ದಾಖಲಿಸಿತು. ಈ ಮೊದಲು 2014ರಲ್ಲಿ 100/2 ಮತ್ತು 2015ರಲ್ಲಿ 90/0 ರನ್‌ ಸಿಡಿಸಿದ ಸಾಧನೆ ಮೆರೆದಿದೆ.

ಟೀಮ್‌ ಇಂಡಿಯಾದಲ್ಲಿ ಕಾಯಂ ಸ್ಥಾನಕ್ಕಾಗಿ ಹಾತೊರೆಯುತ್ತಿರುವ ಗಾಯಕ್ವಾಡ್‌ ಮತ್ತು ನ್ಯೂಜಿಲೆಂಡ್‌ನ ಸ್ಟಾರ್‌ ಬ್ಯಾಟರ್‌ ಕಾನ್ವೇ ಒಬ್ಬರನೊಬ್ಬರು ಮೀರಿಸುವಂತಹ ಬಿರುಸಿನ ಬ್ಯಾಟಿಂಗ್‌ ಮಾಡಿದರು. ಅಪಾಯಕಾರಿ ಆಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಲಖನೌ ತಂಡದ ನಾಯಕ ಕೆ.ಎಲ್‌. ರಾಹುಲ್‌, ಹಲವು ರಣತಂತ್ರ ಹೆಣದರೂ ಪ್ರಯೋಜನವಾಗಲಿಲ್ಲ. 8 ಓವರ್‌ಗಳಲ್ಲಿ ನೂರು ರನ್‌ ಕೂಡಿಸಿದ ಕಾನ್ವೇ ಮತ್ತು ಗಾಯಕ್ವಾಡ್‌, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ 3ನೇ ಸಲ ಶತಕದ ಜತೆಯಾಟವಾಡಿದ ಆರಂಭಿಕ ಜೋಡಿ ಎಂಬ ಹಿರಿಮೆಗೆ ಪಾತ್ರವಾಯಿತು. ಮುರಳಿ ವಿಜಯ್‌ ಮತ್ತು ಮೈಕಲ್‌ ಹಸ್ಸಿ, 2 ಬಾರಿ ಈ ಸಾಧನೆ ಮೆರೆದಿದ್ದರು.

110 ರನ್‌ಗೆ ಮೊದಲ ವಿಕೆಟ್‌ ಜತೆಯಾಟ ಮುರಿದುಬಿದ್ದ ನಂತರ ಸಿಎಸ್‌ಕೆ ತಂಡದ ರನ್‌ ಗತಿ ಕೊಂಚ ಕುಸಿದರೂ ಶಿವಂ ದುಬೆ (27) ಮತ್ತು ಅಂಬಾಟಿ ರಾಯುಡು (27*) ಅಬ್ಬರಿಸಿದ ಪರಿಣಾಮ ಚೆನ್ನೈ 10ರ ಸರಾಸರಿಗಿಂತಲೂ ಅಧಿಕ ರನ್‌ರೇಟ್‌ ಕಾಯ್ದುಕೊಂಡಿತು. ಲಖನೌ ಪರ ಮಾರ್ಕ್‌ ವುಡ್‌ ಮತ್ತು ರವಿ ಬಿಷ್ಣೋಯಿ ತಲಾ ಮೂರು ವಿಕೆಟ್‌ ಪಡೆದರು.

About Author

Leave a Reply

Your email address will not be published. Required fields are marked *

You may have missed