ಹೈಟಿಯಲ್ಲಿ ಭೀಕರ ಪ್ರವಾಹಕ್ಕೆ 15 ಮಂದಿ ಬಲಿ: ಬೀದಿಗೆ ಬಿದ್ದ ಸಾವಿರಾರು ಜನ

0

ಕೆರೇಬಿಯನ್​ ರಾಷ್ಟ್ರ ಹೈಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು ಹಲವು ಕಡೆ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೂ 15 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.

 

ವಾರಾಂತ್ಯದ ಖುಷಿಯಲ್ಲಿದ್ದ ಹೈಟಿ ಮಂದಿಗೆ ಧಾರಾಕಾರ ಮಳೆ ದೊಡ್ಡ ಹೊಡೆತವನ್ನೇ ನೀಡಿದೆ. ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ದೇಶದಾದ್ಯಂತ ನೂರಾರು ಮನೆಗಳು ನಾಶವಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 13,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸತತವಾಗಿ ಸುರಿದ ಭಾರಿ ಮಳೆಗೆ ಜನವಸತಿ ಪ್ರದೇಶಗಳು ಕೆರೆ ಹಾಗೂ ನದಿಗಳಂತಾಗಿ ಪರಿವರ್ತನೆಯಾಗಿವೆ. ದಿಢೀರ್ ಎಂದು ಉಂಟಾಗಿರುವ ಪ್ರವಾಹಕ್ಕೆ ಸುಮಾರು 7,400 ಕ್ಕೂ ಹೆಚ್ಚು ಕುಟುಂಬಗಳು ದಿವಾಳಿ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈಟಿ ಜನರನ್ನು ಹೈರಾಣಾಗಿಸಿರುವ ಮಳೆ, ಬೆಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಪ್ರವಾಹದಿಂದ ಸಂತ್ರಸ್ತರಾದವರ ಅಗತ್ಯಗಳಿಗೆ ಸ್ಪಂದಿಸಲು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ತಿಳಿಸಿದ್ದಾರೆ.

ಜೂನ್ 1 ರಿಂದ ಹೈಟಿಗೆ ಅಪ್ಪಳಿಸುತ್ತಿರುವ ಮಳೆಯು ಈ ವಾರವೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಘಟಕದ ಮಹಾನಿರ್ದೇಶಕ ಮಾರ್ಸೆಲಿನ್ ಎಸ್ಟರ್ಲಿನ್ ಮಾಹಿತಿ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed