ಜೂ. 22 ರಂದು ಮೋದಿ ಅಮೆರಿಕ ಭೇಟಿ: ಶ್ವೇತಭವನದಲ್ಲಿ ಅದ್ಧೂರಿ ಔತಣಕೂಟ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್‌ ತಿಂಗಳ22 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಬೈಡನ್ ಜೊತೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

“ಅಧ್ಯಕ್ಷ ಬೈಡನ್​ ಮತ್ತು ಪ್ರಥಮ ಮಹಿಳೆ ಡಾ.ಜಿಲ್ ಬೈಡನ್ ಅವರು ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಲಿದ್ದಾರೆ. ಈ ಭೇಟಿಯು ಅಮೆರಿಕ ಮತ್ತು ಭಾರತದ ನಡುವಿನ ಆಳವಾದ ಮತ್ತು ನಿಕಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಅಮೆರಿಕನ್ನರು ಮತ್ತು ಭಾರತೀಯರ ಸ್ನೇಹ ಬಂಧಗಳನ್ನೂ ಮತ್ತಷ್ಟು ದೃಢಪಡಿಸಲಿದೆ” ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

“ಚೀನಾದ ಆಕ್ರಮಣಕಾರಿ ನಡವಳಿಕೆಯ ನಡುವೆ ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ಗೆ ಎರಡು ದೇಶಗಳ ಹಂಚಿಕೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಹವಾಮಾನ ಬದಲಾವಣೆಯಿಂದ ಉಂಟಾಗುವ ಸಾಮಾನ್ಯ ಸವಾಲುಗಳನ್ನು ಎದುರಿಸುವ ಬಗೆ, ಉದ್ಯೋಗವಕಾಶಗಳು, ಆರೋಗ್ಯ ಭದ್ರತೆ, ರಕ್ಷಣೆ, ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ದ್ವಿಪಕ್ಷೀಯ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಕುರಿತು ಚರ್ಚೆ ನಡೆಸಲಾಗುವುದು. ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎರಡು ದೇಶಗಳ ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳನ್ನು ಉನ್ನತೀಕರಿಸುವ ಕುರಿತು ಉಭಯ ನಾಯಕರು ಚರ್ಚಿಸುತ್ತಾರೆ ಎಂದು ಕರೀನ್ ಮಾಹಿತಿ ನೀಡಿದ್ದಾರೆ.

“ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿಯವರ ಮುಂಬರುವ ಅಧಿಕೃತ ರಾಜ್ಯ ಭೇಟಿಯು ಐತಿಹಾಸಿಕವಾಗಿರಲಿದೆ. ಉಭಯ ನಾಯಕರ​ ದ್ವಿಪಕ್ಷೀಯ ಮಾತುಕತೆಯು ನಮ್ಮ ನಡುವಿನ ಬಾಂಧವ್ಯಕ್ಕೆ ಹೊಸ ಚೈತನ್ಯ ನೀಡಲಿದೆ” ಎಂದು ಯುಎಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಆಶಾಭಾವ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed