ನೆಪೋಲಿಯನ್ ಗೆ ಏನಾಯಿತು ಎಂದು ನೆನಪಿಲ್ಲವೇ?: ಫ್ರಾನ್ಸ್ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ ರಶ್ಯಾ

0

ಮಾಸ್ಕೋ: ಉಕ್ರೇನ್ ಯುದ್ಧದಲ್ಲಿ ರಶ್ಯಕ್ಕೆ ಸೋಲಾಗಬೇಕೆಂದು ಬಯಸುವುದಾಗಿ ಹೇಳಿಕೆ ನೀಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ವಿರುದ್ಧ ವಾಗ್ದಾಳಿ ನಡೆಸಿರುವ ರಶ್ಯ, ಫ್ರಾನ್ಸ್ ನ ಸರ್ವಾಧಿಕಾರಿಯಾಗಿದ್ದ ನೆಪೋಲಿಯನ್ ಬೊನಾಪಾರ್ಟೆಗೆ ಏನಾಯ್ತು ಎಂಬುದನ್ನು ನೆನಪಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.

 

ಮಾಕ್ರನ್ ರಶ್ಯದ ಜತೆ ಕಪಟ ರಾಜತಾಂತ್ರಿಕತೆ ನಡೆಸುತ್ತಿದ್ದಾರೆ. ಅವರೊಬ್ಬ ನಿಷ್ಪ್ರಯೋಜಕ ಮುಖಂಡ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ಹೇಳಿದ್ದಾರೆ.

ಉಕ್ರೇನ್ ನಲ್ಲಿ ರಶ್ಯಾಕ್ಕೆ ಸೋಲಾಗಬೇಕು ಎಂದು ಫ್ರಾನ್ಸ್ ಬಯಸುತ್ತಿದೆ, ಆದರೆ ರಶ್ಯವನ್ನು ಪುಡಿಮಾಡಬೇಕು ಎಂದು ಯಾವತ್ತೂ ಬಯಸುವುದಿಲ್ಲ. ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಶನಿವಾರ ಮಾಕ್ರನ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮರಿಯಾ ಝಕರೋವಾ `ಫ್ರಾನ್ಸ್ ನಿಂದ ಇಂತಹ ಹೇಳಿಕೆ ಮಾಕ್ರನ್ಗಿಂತಲೂ ಮೊದಲು ಕೇಳಿಬಂದಿತ್ತು ಮತ್ತು ಈಗ ನೆಪೊಲಿಯನ್ ಅವರು ಪ್ಯಾರಿಸ್ ನ ಕೇಂದ್ರಸ್ಥಳದಲ್ಲಿ ಚಿರಶಾಂತಿಗೆ ತೆರಳಿದ್ದಾರೆ ಎಂಬುದನ್ನು ಮಾಕ್ರನ್ ಅರ್ಥಮಾಡಿಕೊಳ್ಳಬೇಕು. ಅವರ ಪ್ರತಿಕ್ರಿಯೆ ಗಮನಿಸಿದರೆ ಪಾಶ್ಚಿಮಾತ್ಯರು ರಶ್ಯದಲ್ಲಿ ಅಧಿಕಾರ ಬದಲಾವಣೆಯ ಉದ್ದೇಶ ಹೊಂದಿದ್ದಾರೆ ಎಂಬುದು ನಿಚ್ಚಳವಾಗಿದೆ’ ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಮಾಕ್ರನ್ ರಶ್ಯ ಪರ ಮೃದುಧೋರಣೆ ಹೊಂದಿದ್ದಾರೆ ಎಂಬ ಅಸಮಾಧಾನ ನೇಟೊದ ಸದಸ್ಯರಲ್ಲಿದೆ. ಅಲ್ಲದೆ, ಪಾಶ್ಚಿಮಾತ್ಯರ ಒಕ್ಕೂಟದಲ್ಲಿ ಫ್ರಾನ್ಸ್ ಅತ್ಯಂತ ದುರ್ಬಲ ಕೊಂಡಿಯಾಗಿದೆ ಎಂಬ ಭಾವನೆಯೂ ಇದೆ. ರಶ್ಯದಲ್ಲಿ ಆಡಳಿತದ ಬದಲಾವಣೆಗೆ ಪ್ರಯತ್ನ ನಡೆಯುತ್ತಿರುವುದು ನಿಜವಾದರೆ ಅದಕ್ಕೆ ನಿಮ್ಮ ಬೆಂಬಲವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಮಾಕ್ರನ್ ` ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ಆಡಳಿತ ಬದಲಾವಣೆಯ ಬಗ್ಗೆ ಒಂದುಕ್ಷಣವೂ ನಾನು ಯೋಚಿಸುವುದಿಲ್ಲ. ಈ ಬಗ್ಗೆ ಹಲವರು ಮಾತನಾಡುತ್ತಿರುವುದನ್ನು ಗಮನಿಸಿದ್ದೇನೆ. ಯಾವ ಬದಲಾವಣೆ ನೀವು ಬಯಸುತ್ತೀರಿ.. ನಿಮ್ಮ ಮುಖಂಡ ಯಾರು? ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed