ತಪ್ಪು ಮಾಡಿದ್ದರೆ ಕಾನೂನಿಗೆ ತಲೆ ಬಾಗುತ್ತೇನೆ: ಫಿಲ್ಮ್ ಚೇಂಬರ್ ಗೆ ಸುದೀಪ್ ಪತ್ರ

0

ನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎನ್ ಎಮ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾ ಮಾಡುವುದಾಗಿ ಹೇಳಿ ಮುಂಗಡ ಹಣ ಪಡೆದು ಬಳಿಕ ಡೇಟ್ಸ್ ನೀಡದೆ ಓಡಾಡುತ್ತಿದ್ದಾರೆ ಎಂದು ದೂರಿದ್ದು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಗುರುತರ ಆರೋಪ ಮಾಡಿದ್ದರು.

ಇದೀಗ ಈ ಬಗ್ಗೆ ನಟ ಕಿಚ್ಚ ಸುದೀಪ್ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.ಕುಮಾರ್ ಮಾಡಿದ್ದ ಆರೋಪಕ್ಕೆ ಸುದೀಪ್ ಕಾನೂನು ಮೂಲಕವೇ ಉತ್ತರಿಸಿದ್ದರು. ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ, ತಮ್ಮ ವ್ಯಕ್ತಿತ್ವಕ್ಕೆ ಕುಮಾರ್ ಧಕ್ಕೆ ತರುತ್ತಿದ್ದಾರೆ ಎಂದು ಮಾನನಷ್ಟ ನೋಟಿಸ್ ಕಳುಹಿಸಿದ್ದರು. ಬರೋಬ್ಬರಿ 10 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು. ನೋಟಿಸ್ ಕಳುಹಿಸುತ್ತಿದ್ದಂತೆಯೇ ಕುಮಾರ್ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸುದೀಪ್ ತಮಗೆ ಮೋಸ ಮಾಡಿದ್ದು ನಿಜ ಎಂದು ಮತ್ತೆ ನೋವು ಹಂಚಿಕೊಂಡಿದ್ದರು.

ಇದೀಗ ಈ ಎಲ್ಲ ಆರೋಪ ಪ್ರತ್ಯಾರೋಪಕ್ಕೆ ಉತ್ತರ ಎನ್ನುವಂತೆ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ ಬರೆದಿದ್ದಾರೆ. ಮೂರು ಸಂಸ್ಥೆಗಳು ನಿರ್ಮಾಪಕರ ಪರ ನಿಲ್ಲಬೇಕೋ ಅಥವಾ ಕಲಾವಿದರ ಪರ ನಿಲ್ಲಬೇಕೋ ಎನ್ನುವ ಸಂದಿಗ್ಧತೆಗೆ ಒಳಗಾಗದೇ ನನ್ನ ಮೇಲೆ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ, ನ್ಯಾಯಾಯಲದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿಯಷ್ಟೇ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ. ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಯಾವುದೇ ನಿರ್ಮಾಪಕರು, ಯಾರೇ ಕಲಾವಿದರು, ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ ಎಂದಿದ್ದಾರೆ.

27 ವರ್ಷಗಳ ಕಾಲ ನಾನೂ ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೇಯೆ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ, 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟತನಕ್ಕಲ್ಲ ಎಂದು ಹೇಳುವ ಮೂಲಕ ತಮಗೂ ನಿರ್ಮಾಪಕರಿಂದ ಬಾಕಿ ಬರಬೇಕಾಗಿದ್ದನ್ನೂ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆ ದಕ್ಕಬಾರದು ಎಂದು ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದಾಗಿ ಕಿಚ್ಚ ಪತ್ರದಲ್ಲಿ ಬರೆದಿದ್ದಾರೆ. ಯಾರದ್ದೋ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು, ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

You may have missed